ಸುದ್ದಿ ಸಂಗ್ರಹ ಚಿತ್ತಾಪುರ
ರಾಜ್ಯ ರಾಜಕಾರಣದಲ್ಲಿ ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿ ಐತಿಹಾಸಿಕ ದಾಖಲೆ ಬರೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಾಲೂಕಿನ ನಾಲವಾರ ಮಠದ ವತಿಯಿಂದ ಚಿನ್ನದ ಉಂಗುರ ನೀಡಿ ವಿಶೇಷವಾಗಿ ಅಭಿನಂದಿಸಲಾಯಿತು.
ತಾಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರವಾದ ನಾಲವಾರದ ಶ್ರೀ ಕೋರಿಸಿದ್ದೇಶ್ವರ ಮಠಕ್ಕೆ ಮುಖ್ಯಮಂತ್ರಿಗಳು ಭೇಟಿ ನೀಡಿದ್ದರು. ತಾಲೂಕಿನ ಸೂಗೂರು ಗ್ರಾಮದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಮುಗಿಸಿ ಮಠಕ್ಕೆ ಆಗಮಿಸಿದ ಸಿಎಂ ಅವರನ್ನು ಮಠದ ಪೀಠಾಧಿಪತಿ ಶ್ರೀ ತೋಟೇಂದ್ರ ಸ್ವಾಮೀಜಿ ಅವರು ಆತ್ಮೀಯವಾಗಿ ಬರಮಾಡಿಕೊಂಡರು. ಸಿದ್ದರಾಮಯ್ಯನವರು ಕರ್ನಾಟಕದ ಇತಿಹಾಸದಲ್ಲೆ ಅತಿ ಹೆಚ್ಚು ಬಜೆಟ್ ಮಂಡಿಸಿದ ಹಣಕಾಸು ಸಚಿವ ಹಾಗೂ ಮುಖ್ಯಮಂತ್ರಿಯಾಗಿ ಸಾಧನೆ ಮಾಡಿರುವುದನ್ನು ಗುರುತಿಸಿ, ಶ್ರೀಗಳು ಅವರಿಗೆ ಚಿನ್ನದ ಉಂಗುರ ತೊಡಿಸುವ ಮೂಲಕ ಗೌರವಿಸಿದರು. ಮಠದ ವತಿಯಿಂದ ನೀಡಲಾದ ಈ ಪ್ರೀತಿಯ ‘ಗೋಲ್ಡನ್’ ಉಡುಗೊರೆಯನ್ನು ಮುಖ್ಯಮಂತ್ರಿಗಳು ನಗುನಗುತ್ತಲೆ ಸ್ವೀಕರಿಸಿ, ಶ್ರೀಗಳಿಗೆ ಭಕ್ತಿಯಿಂದ ಕೃತಜ್ಞತೆ ಸಲ್ಲಿಸಿದರು.
ಮಠಕ್ಕೆ ಭೇಟಿ ನೀಡಿದ ಸಿಎಂ, ಕೋರಿಸಿದ್ದೇಶ್ವರ ಕರ್ತೃ ಗದ್ದುಗೆಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಚಿವರಾದ ಪ್ರಿಯಾಂಕ್ ಖರ್ಗೆ, ಡಾ.ಶರಣಪ್ರಕಾಶ ಪಾಟೀಲ್, ಇತರ ಜನಪ್ರತಿನಿಧಿಗಳು ಮತ್ತು ಮಠದ ಭಕ್ತಾದಿಗಳು ಇದ್ದರು.

