ಸುದ್ದಿ ಸಂಗ್ರಹ ಕಲಬುರಗಿ
ಅನುವಂಶೀಯತೆ, ಪರಿಸರದ ಅಂಶಗಳು, ವಯಸ್ಸು, ಅತಿಯಾದ ಒತ್ತಡ, ಅನಾರೋಗ್ಯಕರ ಜೀವನಶೈಲಿ, ಜಡತ್ವ ಸೇರಿದಂತೆ ಇನ್ನಿತರ ಕಾರಣಗಳಿಂದ ಪಾರ್ಕಿನ್ಸನ್ ಕಾಯಿಲೆ ಬರುತ್ತದೆ ಎಂದು ವೈದ್ಯ ಡಾ.ರಾಜಶೇಖರ ಪಾಟೀಲ ಸಲಹೆ ನೀಡಿದರು.
ನಗರದ ಆಳಂದ ರಸ್ತೆಯ, ಸಂತೋಷ ಕಾಲೋನಿ ಕ್ರಾಸ್ ಸಮೀಪದ ‘ಬಸವಗಂಗಾ ಕ್ಲಿನಿಕ್’ನಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ‘ವಿಶ್ವ ಪಾರ್ಕಿನ್ಸನ್ ದಿನಾಚರಣೆ’ಯಲ್ಲಿ ಮಾತನಾಡಿದ ಅವರು, ನೇರವಾಗಿ ಕೇಂದ್ರ ನರಮಂಡಲದ ಮೇಲೆ ದುಷ್ಪರಿಣಾಮ ಬೀರುವ ಮೂಲಕ ಮೆದಳು, ದೇಹದ ಚಲನೆಗೆ ತೊಂದರೆಯುನ್ನುಂಟು ಮಾಡುತ್ತದೆ. ಕೈಕಾಲು ಜೋಮು ಹಿಡಿಯುವುದು, ನಿಲ್ಲಲು ಹಾಗೂ ನಡೆಯಲು ಆಯಾಸವಾಗುವದು, ನಿದ್ರಾಹೀನತೆ, ಮಾತಿನಲ್ಲಿ ಬದಲಾವಣೆ, ಮೂಗಿನ ಕಾರ್ಯದಲ್ಲಿ ತೊಂದರೆ, ಮೂತ್ರ ಸೋರುವಿಕೆಯಂತಹ ಲಕ್ಷಣಗಳು ಪಾರ್ಕಿನ್ಸನ್ ಕಾಯಿಲೆಯದಾಗಿದ್ದು, ಇದರ ಬಗ್ಗೆ ಮುಂಜಾಗೃತೆ ವಹಿಸುವುದು ಅಗತ್ಯವಾಗಿದೆ ಎಂದರು.
ಪಾರ್ಕಿನ್ಸನ್ ಕಾಯಿಲೆ ಬರದಂತೆ ಮುಂಜಾಗ್ರತೆಯ ಕ್ರಮವಾಗಿ ನಿಯಮಿತವಾಗಿ ವ್ಯಾಯಾಮ, ಯೋಗ, ಧ್ಯಾನ ಮಾಡಬೇಕು. ಸಮತೋಲಿತ ಆಹಾರ, ಶುದ್ದವಾದ ನೀರು ಸೇವಿಸಬೇಕು. ಒತ್ತಡಕ್ಕೆ ಒಳಗಾಗಬಾರದು. 7-8 ಗಂಟೆಗಳ ಕಾಲ ಗಾಡವಾದ ನಿದ್ರೆ, ಧನಾತ್ಮಕ ಚಿಂತನೆ, ಮದ್ಯಪಾನ, ಧೂಮಪಾನ, ಗುಟ್ಕಾದಂತಹ ದುಶ್ಚಟಗಳಿಂದ ದೂರವಿರಬೇಕು. ಕಾಯಿಲೆ ಬಂದ ನಂತರ ತಜ್ಞ ವೈದ್ಯರನ್ನು ಭೇಟಿಯಾಗಿ ಸಂಬಂಧಿತ ಚಿಕಿತ್ಸೆ ಪಡೆಯಬೇಕು. ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಹಾಗೂ ಸಮಾಜ ಸೇವಕ ಎಚ್.ಬಿ ಪಾಟೀಲ, ಗೌರವ ಸಲಹೆಗಾರ ಶಿವಯೋಗೆಪ್ಪಾ ಎಸ್.ಬಿರಾದಾರ, ಸದಸ್ಯರಾದ ಅಸ್ಲಾಂ ಶೇಖ್, ದತ್ತು ಹಡಪದ, ಕ್ಲಿನಿಕ್‌ನ ಸಿಬ್ಬಂದಿಗಳು ಸೇರಿದಂತೆ ಅನೇಕರು ಇದ್ದರು.

