ಸುದ್ದಿ ಸಂಗ್ರಹ ಬೆಂಗಳೂರು
ರಾಜ್ಯದಲ್ಲಿ ಆಟೋ ಗ್ಯಾಸ್ ಕೊರತೆ ಇಲ್ಲ. ವದಂತಿಗಳಿಗೆ ಯಾರು ಕಿವಿಗೊಡಬಾರದು ಎಂದು ಆಹಾರ ಇಲಾಖೆ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದೆ.
ರಾಜ್ಯದ ವಿವಿಧ ಆಟೋ ಗ್ಯಾಸ್ ಬಂಕ್‌ಗಳಲ್ಲಿ ಅನಿಲದ ದಾಸ್ತಾನು ಕೊರತೆಯಿದೆ ಎಂಬ ತಪ್ಪು ಮಾಹಿತಿ ಹರಡುತ್ತಿದೆ. ಕಳೆದ ಕೆಲವು ದಿನಗಳಿಂದ ಆಟೋ ಮಾಲೀಕರು ಮತ್ತು ಚಾಲಕರು ಬಂಕ್‌ಗಳ ಮುಂದೆ ಸುದೀರ್ಘ ಸರದಿ ಸಾಲಿನಲ್ಲಿ ನಿಲ್ಲುತ್ತಿರುವ ಅಂಶ ಸರ್ಕಾರದ ಗಮನಕ್ಕೆ ಬಂದಿದೆ. ಈ ಕುರಿತು ಕೆಲವು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳು ಕೇವಲ ವದಂತಿಗಳಾಗಿದ್ದು, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಆಹಾರ ಇಲಾಖೆ ಸ್ಪಷ್ಟಪಡಿಸಿದೆ.
ಕೆಲವು ಖಾಸಗಿ ಆಟೋ ಗ್ಯಾಸ್ ಸರಬರಾಜು ಸಂಸ್ಥೆಗಳಲ್ಲಿ ಮಾತ್ರ ಅಲ್ಪಮಟ್ಟಿನ ಕೊರತೆ ಕಂಡುಬಂದಿದ್ದು, ಇದನ್ನು ಸರಿಪಡಿಸಲು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಾದ IOC (ಇಂಡಿಯನ್ ಆಯಿಲ್), BPC (ಭಾರತ್ ಪೆಟ್ರೋಲಿಯಂ) ಮತ್ತು HPC (ಹಿಂದೂಸ್ತಾನ್ ಪೆಟ್ರೋಲಿಯಂ) ಮೂಲಕ ಹೆಚ್ಚಿನ ಪ್ರಮಾಣದ ಅನಿಲವನ್ನು ಪೂರೈಕೆ ಮಾಡಲಾಗುತ್ತಿದೆ. ಹಿಂದೆ ಈ ಮೂರು ಸಂಸ್ಥೆಗಳು ಸರಾಸರಿ 56.67 ಮೆಟ್ರಿಕ್ ಟನ್ ಆಟೋ ಗ್ಯಾಸ್ ಅನ್ನು ಸರಬರಾಜು ಮಾಡುತ್ತಿದ್ದವು. ಆದರೆ ಪ್ರಸ್ತುತ ಬೇಡಿಕೆ ಪೂರೈಸಲು ಸರಬರಾಜು ಪ್ರಮಾಣ ಗಣನೀಯವಾಗಿ ಹೆಚ್ಚಿಸಲಾಗಿದ್ದು, ಸದ್ಯ ಪ್ರತಿದಿನ ಸರಾಸರಿ 83.58 ಮೆಟ್ರಿಕ್ ಟನ್ ಗ್ಯಾಸ್ ಚಿಲ್ಲರೆ ಮಾರಾಟ ಮಳಿಗೆಗಳಿಗೆ ಪೂರೈಸಲಾಗುತ್ತಿದೆ ಎಂದು ಮಾಹಿತಿ ನೀಡಿದೆ.
ಕಳೆದ ಏಪ್ರಿಲ್ 2ರಿಂದ ಏಪ್ರಿಲ್ 6ರವರೆಗಿನ ಅಂಕಿ ಅಂಶಗಳನ್ನು ಗಮನಿಸಿದರೆ, ಪೂರೈಕೆಯಲ್ಲಿ ಸ್ಥಿರತೆ ಇರುವುದು ಕಂಡುಬರುತ್ತಿದೆ.
ಏಪ್ರಿಲ್ 2: 87.78 ಮೆಟ್ರಿಕ್ ಟನ್
ಏಪ್ರಿಲ್ 3: 86.05 ಮೆಟ್ರಿಕ್ ಟನ್
ಏಪ್ರಿಲ್ 4: 84.80 ಮೆಟ್ರಿಕ್ ಟನ್
ಏಪ್ರಿಲ್ 5: 94.11 ಮೆಟ್ರಿಕ್ ಟನ್ (ಗರಿಷ್ಠ)
ಏಪ್ರಿಲ್ 6: 83.58 ಮೆಟ್ರಿಕ್ ಟನ್
ಅನಿಲವನ್ನು ಈ ಮೂರು ಪ್ರಮುಖ ಸಂಸ್ಥೆಗಳು ಯಶಸ್ವಿಯಾಗಿ ಪೂರೈಕೆ ಮಾಡಿವೆ. ಆದ್ದರಿಂದ ರಾಜ್ಯದ ಆಟೋ ಮಾಲೀಕರು ಮತ್ತು ಚಾಲಕರು ಇಂತಹ ಯಾವುದೆ ಸುಳ್ಳು ವದಂತಿ ನಂಬಬಾರದು ಮತ್ತು ಆತಂಕಕ್ಕೊಳಗಾಗಿ ಬಂಕ್‌ಗಳ ಮುಂದೆ ಸಾಲುಗಟ್ಟಿ ನಿಲ್ಲಬಾರದು ಎಂದು ಸರ್ಕಾರ ಮನವಿ ಮಾಡಿದೆ. ಅನಿಲ ಪೂರೈಕೆ ವ್ಯವಸ್ಥಿತವಾಗಿ ನಡೆಯುತ್ತಿದ್ದು, ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಬೇಕೆಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

