Site icon ಸುದ್ದಿ ಸಂಗ್ರಹ

ಒಡೆದ ಫೋನ್​ನಿಂದ ಸೆಲ್ಫಿ ತೆಗೆಯುವುದನ್ನು ಗಮನಿಸಿ ಅಭಿಮಾನಿಗೆ ಹೊಸ ಮೊಬೈಲ್​​ ಕೊಟ್ಟ ಸಂಜು

ಐಪಿಎಲ್​ ಶುರುವಾಗುವ ಮುನ್ನ ಮುಕ್ತಾಯಗೊಂಡ ಟಿ20 ವಿಶ್ವಕಪ್​ ಟೂರ್ನಮೆಂಟ್​ನಲ್ಲಿ ಸ್ಫೋಟಕ ಆಟವಾಡಿ ಟೀಮ್​ ಇಂಡಿಯಾ ವಿಶ್ವಕಪ್​ ಎತ್ತಿಹಿಡಿಯುವಲ್ಲಿ ಪ್ರಮುಖ ಪಾತ್ರವಹಿಸಿದ ಸಂಜು ಸ್ಯಾಮ್ಸನ್​, ಐಪಿಎಲ್​ನಲ್ಲಿ ತಮ್ಮ ಫಾರ್ಮ್​ ಕಳೆದುಕೊಂಡಿದ್ದಾರೆ. ಈ ಸೀಸನ್​ನಿಂದ ಆರಂಭಿಕ ಆಟಗಾರನಾಗಿ ಸಿಎಸ್​ಕೆ ತಂಡ ಸೇರಿಕೊಂಡಿರುವ ಸಂಜು ಸ್ಯಾಮ್ಸನ್, ಒಂದೆ ಒಂದು ಪಂದ್ಯದಲ್ಲಿ ಎರಡಂಕಿಯನ್ನು ದಾಟಿಲ್ಲ. ಹೀಗಾಗಿ ಫಾರ್ಮ್​ಗೆ ಮರಳಲು ಸಂಜು ಹರಸಾಹಸ ಪಡುತ್ತಿದ್ದಾರೆ. ಅಲ್ಲದೆ ಅವರ ವಿರುದ್ಧ ಸಾಕಷ್ಟು ಟೀಕೆಗಳು ಕೂಡ ವ್ಯಕ್ತವಾಗುತ್ತಿವೆ. ಇದರ ನಡುವೆ ಸಂಜು ಮಾಡಿದ ಕೆಲಸವೊಂದು ಎಲ್ಲರ ಮೆಚ್ಚುಗೆ ಪಾತ್ರವಾಗಿದೆ.

ಸೆಲ್ಫಿ ತೆಗೆದುಕೊಳ್ಳಲು ಬಂದ ಅಭಿಮಾನಿಯೊಬ್ಬರಿಗೆ ಕೇರಳ ಮೂಲದ ಕ್ರಿಕೆಟಿಗ ಸಂಜು ಸ್ಯಾಮ್ಸನ್ ಮೊಬೈಲ್ ಫೋನ್ ಉಡುಗೊರೆಯಾಗಿ ನೀಡಿದ್ದಾರೆ. ಪಾಲಕ್ಕಾಡ್‌ನ ಕದಂಬಜಿಪುರಂ ಮೂಲದ ಟಿ. ಶಬರೀಸ್ ಅವರು ಟೀಮ್​ ಇಂಡಿಯಾ ಸೂಪರ್‌ಸ್ಟಾರ್‌ನಿಂದ ಫೋನ್ ಉಡುಗೊರೆಯಾಗಿ ಪಡೆದಿದ್ದಾರೆ. ನಿನ್ನೆ (ಏಪ್ರಿಲ್​ 07) ಸಂಜೆ 5.30ರ ಸುಮಾರಿಗೆ ಕದಂಬಜಿಪುರಂ ಪುಂಚಪ್ಪಡಂ ಬಸ್ ನಿಲ್ದಾಣದ ಬಳಿ ಈ ಘಟನೆ ನಡೆದಿದೆ.

ಶಬರೀಶ್ ಮತ್ತು ಆತನ ಸ್ನೇಹಿತರು ಎಂದಿನಂತೆ ಸಂಜೆ ಪುಂಚಪ್ಪಡಂ ಮೈದಾನದಲ್ಲಿ ಕ್ರಿಕೆಟ್ ಆಡಲು ಹೋಗಿದ್ದರು. ಶಬರೀಶ್ ಅವರು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸಂಜು ಅವರ ಪಕ್ಕಾ ಅಭಿಮಾನಿ. ಕ್ರಿಕೆಟ್​ ಆಡುವ ವೇಳೆ ಶಬರೀಶ್ ಅವರು ಹಳದಿ ಜೆರ್ಸಿ ಧರಿಸಿದ್ದರು. ಅವರ ಕೈಯಲ್ಲಿ ಬ್ಯಾಟ್ ಕೂಡ ಇತ್ತು. ಅಷ್ಟರಲ್ಲಿ, ಪುಂಚಪ್ಪಡಂ ಶಾಲಾ ಬಸ್ ನಿಲ್ದಾಣದ ಬಳಿ ನಿಂತಿದ್ದ ಕಪ್ಪು ರೇಂಜ್ ರೋವರ್ ಕಾರನ್ನು ಅವರು ಗಮನಿಸಿದರು.

ಈ ವೇಳೆ ಸಂಜು ಸ್ಯಾಮ್ಸನ್ ಅವರು ಕಾರಿನ ಬಳಿ ನಿಂತು ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಿರುವುದನ್ನು ನೋಡಿದರು. ಐಪಿಎಲ್‌ನಲ್ಲಿ ಟಿವಿಯಲ್ಲಿ ನೋಡುತ್ತಿದ್ದ ತನ್ನ ನೆಚ್ಚಿನ ಆಟಗಾರ ತನ್ನ ಮುಂದೆ ನಿಂತಿರುವುದನ್ನು ನೋಡಿ ಶಬರೀಶ್ ಒಂದು ಕ್ಷಣ ಅಚ್ಚರಿಗೊಳಗಾದರು. ಒಂದು ಕ್ಷಣದಲ್ಲಿ ತನ್ನ ಕಣ್ಣನ್ನು ತಾನೇ ನಂಬದ ಸ್ಥಿತಿ ಎದುರಾಯಿತು. ಇದು ಕನಸಾ ಎಂಬಂತೆ ಭಾಸವಾಯಿತು. ಆದರೆ ಅಂತಿಮವಾಗಿ ಅದು ಕನಸಲ್ಲ ನಿಜ ಅನ್ನೋದು ಶಬರೀಶ್​ ಅವರ ಅರಿವಿಗೆ ಬಂದ ಕೂಡಲೆ ಆತನ ಖುಷಿಗೆ ಪಾರವೆ ಇರಲಿಲ್ಲ.

ಕೂಡಲೆ ಸಂಜು ಸ್ಯಾಮ್ಸನ್​ ಬಳಿ ಓಡಿದ ಶಬರೀಶ್. ಈ ವೇಳೆ ಸಂಜು ವಿಡಿಯೋ ಕಾಲ್​ನಲ್ಲಿದ್ದರು. ಶಬರೀಶ್​ ಬರುವುದನ್ನು ನೋಡಿ ಕಾಯಿರಿ ಎಂದು ಕೈ ಸನ್ನೆ ಮಾಡಿದರು. ವಿಡಿಯೋ ಕಾಲ್​ನಲ್ಲಿ ಮಾತನಾಡಿದ ಬಳಿಕ, ಶಬರೀಶ್​ನನ್ನು ಹತ್ತಿರ ಕರೆದು ಆತನ ಯೋಗಕ್ಷೇಮವನ್ನು ವಿಚಾರಿಸಿದರು. ಈ ವೇಳೆ ಶಬರೀಶ್​ ಅವರು ಸಂಜು ಬಳಿ ಸೆಲ್ಫಿ ತೆಗೆದುಕೊಳ್ಳಬಹುದೆ ಎಂದು ಕೇಳಿದರು. ಇದಕ್ಕೆ ಓಕೆ ಎಂದರು ಸಂಜು. ಸೆಲ್ಫಿ ತೆಗೆದುಕೊಳ್ಳುವಾಗ ಶಬರೀಶ್ ಅವರ ಫೋನ್‌ನ ಡಿಸ್​ಪ್ಲೆ ಬಿರುಕು ಬಿಟ್ಟಿರುವುದನ್ನು ಸಂಜು ಗಮನಿಸಿದರು. ತೆಗೆದ ಸೆಲ್ಫಿ ಚಿತ್ರ ಸ್ಪಷ್ಟವಾಗಿರಲಿಲ್ಲ. ಕೂಡಲೆ ಸಂಜು, ತಮ್ಮ ಕಾರಿನ ಟ್ರಂಕ್ ತೆರೆದು, ಸುಮಾರು 40 ಸಾವಿರ ರೂ. ಬೆಲೆ ಬಾಳುವ ಒಂದು ಫೋನ್ ತೆಗೆದು ಶಬರೀಶ್‌ಗೆ ಕೊಟ್ಟರು. ಈ ಫೋನ್​ ನಿಮ್ಮದಾಗಲಿ, ನಿಮ್ಮ ಫೋನ್‌ನ ಡಿಸ್​ಪ್ಲೇ ಮುರಿದಿಲ್ಲ ಎಂದು ತಮಾಷೆ ಮಾಡಿ, ಶಬರೀಶ್‌ಗೆ ಫೋನ್ ಕೊಟ್ಟು, ಕ್ರಿಕೆಟ್ ಚೆನ್ನಾಗಿ ಆಡುವಂತೆ ಸಲಹೆ ನೀಡಿ ಮತ್ತೆ ಸಂಜು ತಮ್ಮ ಪ್ರಯಾಣ ಮುಂದುವರಿಸಿದರು.

ಸಂಜು ಅವರ ಈ ಗುಣ ಎಲ್ಲರಿಗೂ ಇಷ್ಟವಾಗಿದ್ದು, ಮೆಚ್ಚುಗೆಯ ಸುರಿಮಳೆಗೈಯುತ್ತಿದ್ದಾರೆ. ಸರಳ ವ್ಯಕ್ತಿತ್ವದ ಸಂಜು ತನ್ನ ನಡೆಯಿಂದಲೇ ಆಗಾಗ ಪ್ರಶಂಸೆಗೆ ಒಳಗಾಗುತ್ತಿರುತ್ತಾರೆ. ಸದ್ಯ ಐಪಿಎಲ್​ನಲ್ಲಿ ಸಿಎಸ್​ಕೆ ಪರ ಆಡುತ್ತಿರುವ ಸಂಜು, ಆದಷ್ಟು ಬೇಗ ತಮ್ಮ ಫಾರ್ಮ್​ಗೆ ಮರಳಲಿ ಅನ್ನೋದು ಅಭಿಮಾನಿಗಳ ಬಯಕೆಯಾಗಿದೆ, (ಏಜೆನ್ಸೀಸ್​).

Exit mobile version