ಸುದ್ದಿ ಸಂಗ್ರಹ ಟೆಂಗಳಿ
ಏಪ್ರಿಲ್ 6ರಿಂದ 8ರವರೆಗೆ ಕಾಳಗಿ ತಾಲೂಕಿನ ಟೆಂಗಳಿ ಗ್ರಾಮದ ಆರಾಧ್ಯ ದೈವ ಶ್ರೀ ಭೀಮೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯುವ ಧಾರ್ಮಿಕ ತ್ರಿವೇಣಿ ಸಂಗಮ ಅಂದರೆ ರಾಚಣ ವೀರಭದ್ರೇಶ್ವರ ಅಗ್ಗಿ, ಶರಣಬಸವೇಶ್ವರ ರಥೋತ್ಸವ, ಭೀಮೇಶ್ವರ 116ನೇ ಜಾತ್ರೆಯ ಧಾರ್ಮಿಕ ತ್ರಿವೇಣಿ ಸಂಗಮದ ಸಂಭ್ರಮ ನೋಡಿ ಶ್ರೀ ಭೀಮೇಶ್ವರ ದೇವರ ದರ್ಶನ ಪಡೆದು ಪಾವನರಾಗುವಂತೆ ಶ್ರೀ ಭೀಮೇಶ್ವರ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ವೀರೇಂದ್ರ ವಾಲಿ, ಪ್ರಧಾನ ಕಾರ್ಯದರ್ಶಿ ವೀರಭದ್ರಯ್ಯ ಸಾಲಿಮಠ ಮತ್ತು ಆಡಳಿತ ಮಂಡಳಿಯ ಸದಸ್ಯ ಶಿವರಾಜ ಅಂಡಗಿ ತಿಳಿಸಿದ್ದಾರೆ.
ಗ್ರಾಮದ ಶ್ರೀ ಭೀಮೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ತೆಂಗಳಿ ಗ್ರಾಮದ ಪಂಚಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಏಪ್ರಿಲ್ 6ರಂದು ರಾತ್ರಿ 8 ಗಂಟೆಗೆ ಗ್ರಾಮದ ಮುಖ್ಯದ್ವಾರದಿಂದ ಪ್ರಾರಂಭವಾಗುವ ಪಲ್ಲಕ್ಕಿ ಮೆರವಣಿಗೆ ಖ್ಯಾತ ಪುಣೆ ಡ್ರಮ್ಸ್, ಕೇರಳ ಚಂಡೆ, ಚಿಕ್ಕಮಂಗಳೂರಿನ ವೀರಗಾಸೆ, ಟೆಂಗಳಿಯ ಡೊಳ್ಳು ಕುಣಿತ, ಕೋಲಾಟ, ಪುರವಂತರ ಸೇವೆ, ಕಲಬುರಗಿ ಬ್ಯಾಂಜೋ, ಮತ್ತಿಮೂಡ ಡರ್ಬಾರ್ ಬ್ಯಾಂಜೋ ಮತ್ತು ಭಾಜಾ ಭಜಂತ್ರಿ ಸೇರಿದಂತೆ ವಿವಿಧ ಗ್ರಾಮದ ಭಜನಾ ಮಂಡಳಿಯಿಂದ ಬಹುವಿಜ್ರಂಭಣೆಯಿಂದ ರಾತ್ರಿಯಿಡಿ ಫಲ್ಲಕ್ಕಿ ಉತ್ಸವ ಜರುಗುವುದು ಎಂದರು.
ಏಪ್ರಿಲ್ 7ರಂದು ಬೆಳಿಗ್ಗೆ ಅಗ್ನಿ ಪ್ರವೇಶ ಮತ್ತು ಮುಂಜಾನೆಯಿಂದ ಸಂಜೆವರೆಗೆ ಭಕ್ತರಿಂದ ಪ್ರಸಾದ ವಿತರಣೆ, ಸಂಜೆ 6 ಗಂಟೆಗೆ ಟೆಂಗಳಿ- ಮಂಗಲಗಿಯ ಶಾಂತೇಶ್ವರ ಮಠದ ಪೀಠಾಧಿಪತಿ ಡಾ.ಶಾಂತಸೋಮನಾಥ ಶೀವಾಚಾರ್ಯರ ದಿವ್ಯ ಸಾನಿಧ್ಯದಲ್ಲಿ ರಥೋತ್ಸವ ಜರುಗುವುದು. ಏಪ್ರಿಲ್ 8ರಂದು ಸಂಜೆ 4 ಗಂಟೆಗೆ ಜಂಗಿ ಪೈಲ್ವಾನರಿಂದ ಕುಸ್ತಿ ಜರುಗುವುದು ಎಂದರು.
ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ವೀರಭದ್ರಯ್ಯ ಸಾಲಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಾತ್ರೆ ಸುಗಮವಾಗಿ ನಡೆಯಲು ಗ್ರಾಮದ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಿ ಅವರಿಗೆ ಎಲೆ ಅಡಿಕೆ ನೀಡುವ ಮೂಲಕ ಆಮಂತ್ರಿಸಿ ಜವಾಬ್ದಾರಿ ನೀಡಲಾಯಿತು.
ಜಾತ್ರಾ ಮಹೋತ್ಸವ ಆಹ್ವಾನ ಪತ್ರಿಕೆಯನ್ನು ಟೆಂಗಳಿ ಗ್ರಾಮದ ಶ್ರೀ ಭೀಮೇಶ್ವರ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ವೀರೇಂದ್ರ ವಾಲಿ, ಪ್ರಧಾನ ಕಾರ್ಯದರ್ಶಿ ವೀರಭದ್ರಯ್ಯ ಸಾಲಿಮಠ, ಆಡಳಿತ ಮಂಡಳಿ ಸದಸ್ಯರಾದ ಶಿವರಾಜ ಅಂಡಗಿ, ವೀರಭದ್ರಪ್ಪ ಚೇಂಗಟಿ, ಶರಣಪ್ಪ ಕಲಬುರಗಿ, ರೇವಶೇಟ್ಟಿ ತುಪ್ಪದ ಮತ್ತು ಗ್ರಾಮದ ಪ್ರಮುಖರು ಜಾತ್ರಾ ಮಹೋತ್ಸವದ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ಭೀಮಾಶಂಕರ ಅಂಕಲಗಿ, ಗುಂಡಪ್ಪ ಪಟ್ಟೇದ, ಉಲ್ಲಾಸ ದೇಶಪಾಂಡೆ, ರಾಜು ಪಟೇದ, ವಿಶ್ವನಾಥ ಬಾಳದೆ, ವೀರಭದ್ರಪ್ಪ ಬಾಳದೆ, ಮಂಜುನಾಥ ಭೇರನ, ಶರಣಗೌಡ ಪೋ. ಪಾಟೀಲ, ಶಿವಶರಣ ಕೇಶ್ವಾರ, ಲಿಂಗನಬಸವ ಸೇಡಂ, ಮಹ್ಮದ ಲದಾಫ್, ಜಾಕೀರ್ ಅತ್ತಾರ, ಸಲೀಂ, ವಿಜಯಕುಮಾರ ತುಮಕುನ್, ಗಿರಿಮಲ್ ಬೂಸನ್, ಚಂದ್ರಶೇಖರ ಎಲೇರಿ, ಭೀಮಾಶಂಕರ ಹೊಳಕುಂದಿ, ಶಿವಶರಣ ಕಮನೂರ, ಬಸವರಾಜ ತುಪ್ಪದ್, ಪ್ರಭು ವಿಶ್ವಕರ್ಮ, ಡಾ.ವಿವೇಕಾನಂದ ಬುಳ್ಳಾ ಸೇರಿದಂತೆ ಅನೇಕರು ಇದ್ದರು.
ಸಭೆಯ ಅಧ್ಯಕ್ಷತೆಯನ್ನು ಭೀಮೇಶ್ವರ ಟ್ರಸ್ಟ್ ಅಧ್ಯಕ್ಷ ವಿರೇಂದ್ರ ವಾಲಿ ವಹಿಸಿದ್ದರು, ಸಮಿತಿ ಸದಸ್ಯ ಶಿವರಾಜ ಅಂಡಗಿ ವಂದಿಸಿದರು.

