ಸುದ್ದಿ ಸಂಗ್ರಹ ಸೇಡಂ
ತಾಲೂಕಿನ ಮಳಖೇಡದಲ್ಲಿರುವ ಹಝರತ್ ಸೈಯದ್ ಶಾಹ್ ಖಲಿಫತ್ ಊರ್ ರಹಮಾನ್ ಖಾದ್ರಿ ದುರ್ಗಾ ಶರೀಫ್’ನಲ್ಲಿ ಮಾ.26ರಿಂದ 28ರವರೆಗೆ ವಾರ್ಷಿಕ ಉರೂಸ್ ಶರೀಫ್ (ಜಾತ್ರೆ) ಜರುಗಲಿದೆ ಎಂದು ಹಝರತ್ ಅಲ್ ಹಜ್ ಸೈಯದ್ ಶಾಹ ಮುಸ್ತಫಾ ಖಾದ್ರಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ.26ರಂದು ರಾತ್ರಿ 8.30ಕ್ಕೆ ಗುರುವಾರ ಹಲಖಾ (ಪ್ರಾರ್ಥನೆ) ಮತ್ತು ಗುಸುಲ್ ಶರೀಫ್ (ಗದ್ದುಗೆಗೆ ಅಭಿಷೇಕ), 27ರಂದು ಸಂದಲ್ ನಡೆಯುವುದು, ಮಳಖೇಡ, ಹೂಡಾ(ಬಿ), ಸಂಗಾವಿ, ಮಳಖೇಡ ಸ್ಟೇಷನ್ ಕೂನ್ನೂರ ಮತ್ತು ದಿಗ್ಗಾಂವ್ ಗ್ರಾಮಗಳಿಂದ ಸಂದಲ್ ಭವ್ಯ ಮೆರವಣಿಗೆ ನಡೆಯುವುದು, ನಂತರ ಹಝರತ್ ಸೈಯದ್ ಶಾಹ್ ಮುಸ್ತಫಾ ಖಾದ್ರಿ ಅವರಿಂದ ಖಂದಲೇಪನ ಜರುಗುವುದು ಎಂದರು.
ಮಾ.28ರಂದು ರಾತ್ರಿ 8.30ಕ್ಕೆ ಮಳಖೇಡದಿಂದ ಪಂಜಾ ಮೆರವಣಿಗೆ ನಡೆಯುವುದು, ನಂತರ ದುರ್ಗಾ ಪೀಠಾಧಿಪತಿ ಹಜರತ್ ಸೈಯದ್ ಶಾಹ್ ಮುಸ್ತಫಾ ಖಾದ್ರಿ ಅವರ ಸಾನಿಧ್ಯದಲ್ಲಿ ಅಖಿಲ ಭಾರತ ಮಾನವ ಧರ್ಮ ಸೇವಾ ಟ್ರಸ್ಟ್ ಆಶ್ರಯದಲ್ಲಿ ಮಾನವ ಧರ್ಮ ಚಿಂತನ ಸಭೆ ನಡೆಯುವುದು. ನಂತರ ಖವ್ವಾಲಿ ಮತ್ತು ಗಿಗಿ ಪದಗಳ ಗಾಯನ ನಡೆಯುವುದು ಎಂದರು.
29ರಂದು ಬೆಳಗ್ಗೆ 7ಕ್ಕೆ ಫಾತಹಾ ಖಾನಿ ಪುಷ್ಪಾರ್ಚನೆ ನಡೆಯುವುದು, ಹಝರತ್ ಸಜ್ಜಾದಾ ನಶೀನ ಅವರ ಅಮೃತ ಹಸ್ತದಿಂದ ಪ್ರಸಾದ ವಿತರಣೆ, ಮಳಖೇಡ ಹಾಗೂ ಹೂಡಾ (ಬಿ) ಭಕ್ತಿಯಿಂದ ಬೆಳ್ಳಿ ಖಡ್ಗಗಳು ಮತ್ತು ಬೆಳ್ಳಿ ಗಧೆಯ ಕುಸ್ತಿ ನಡೆಯುವುದು ಎಂದರು.
ಈ ಕಾರ್ಯಕ್ರಮಕ್ಕೆ ವಿವಿಧ ಮಠಾಧೀಶರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ ಸೇರಿದಂತೆ ಇತರ ಶಾಸಕರು ಆಗಮಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ರಾಜು ಬೀಜನಳ್ಳಿ, ಮಲ್ಲಪ್ಪ ಆರಬೋಳ, ಪೀರಪ್ಪರೆಡ್ಡಿ ಭಗವಾನ್ ಬೋಚಿನ್, ಸುಭಾಶ್ಚಂದ್ರ ನರೋಳ ಇದ್ದರು.

