ಸುದ್ದಿ ಸಂಗ್ರಹ ಕಲಬುರಗಿ
ಮಕ್ಕಳಿಗೆ ಬಾಲ್ಯದಿಂದಲೇ ಮೌಲ್ಯ, ದೇಶದ ಸಂಸ್ಕೃತಿ, ಪರಂಪರೆ, ಹಬ್ಬಗಳು, ಉತ್ಸವಗಳ ಹಿನ್ನಲೆಯ ಬಗ್ಗೆ ಅವರಲ್ಲಿ ಬಿತ್ತುವ ಕಾರ್ಯ ಮಾಡಬೇಕಾದದ್ದು ಪ್ರಸ್ತುತ ಜರೂರಿಯಾಗಿದೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ ಪಾಟೀಲ ಅಭಿಮತಪಟ್ಟರು.
ಮಹಾಗಾಂವ ಕ್ರಾಸ್ ಸಮೀಪದ ಚಿಗುರು ನಿರ್ಗತಿಕ ಮತ್ತು ಅನಾಥ ಮಕ್ಕಳ ನಿಲಯದಲ್ಲಿ ಕಲಬುರಗಿಯ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಯುಗಾದಿ ಹಬ್ಬದ ನಿಮಿತ್ಯ ಗುರುವಾರ ಜರುಗಿದ ‘ಯುಗಾದಿ ಮಕ್ಕಳ ಕಲರವ’ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನ ಯುವ ಜನತೆ ವಿದೇಶಿ ಸಂಸ್ಕೃತಿಗೆ ಮಾರುಹೋಗಿ ನಮ್ಮತನ ಮರೆಯುತ್ತಿದ್ದಾರೆ. ಇದರಿಂದ ಅನೇಕ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ ಎಂದರು.
ಅನಾಥಾಲಯದ ಮುಖ್ಯಸ್ಥ ಶರಣು ಎ.ಕಮಠಾಣ ಮಾತನಾಡಿ, ಭಾರತ ಕೃಷಿ ಪ್ರಧಾನ ದೇಶವಾಗಿದೆ. ರೈತರು, ಶ್ರಮಜೀವಿಗಳು ವರ್ಷದ ಕೊನೆಯಲ್ಲಿ ತಮ್ಮ ಚಟುವಟಿಕೆಗಳನ್ನು ಮುಗಿಸಿ, ಆ ವರ್ಷಕ್ಕೆ ವಿದಾಯ ಹೇಳಿ, ಮುಂದಿನ ವರ್ಷವನ್ನು ಸ್ವಾಗಿಸುವ ದಿನ ಇದಾಗಿದೆ. ಸೂಕ್ತ ಕಾಲಕ್ಕೆ ಮಳೆಯಾಗಿ, ಉತ್ತಮ ಫಸಲನ್ನು ಪಡೆದು ರೈತ ಸದೃಢನಾಗಬೇಕು. ನಿಸರ್ಗದೊಂದಿಗೆ ಭಾರತೀಯ ಹಬ್ಬಗಳು ಆಚರಿಸಲಾಗುತ್ತದೆ. ಯುಗಾದಿ ಸಮಯದಲ್ಲಿ ಇಡಿ ಗಿಡ-ಮರಗಳನ್ನು ತನ್ನ ಹಳೆಯ ಎಲೆಗಳನ್ನು ಉದರಿಸಿಕೊಂಡು, ಹೊಸದಾಗಿ ಚಿಗುರುತ್ತವೆ. ದೇಶದ ಹಬ್ಬಗಳು ನಿಸರ್ಗದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದು ವಿಶೇಷತೆಯಾಗಿದೆ. ಹಬ್ಬಗಳ ಆಚರಣೆಯ ಹಿನ್ನಲೆಯ ಬಗ್ಗೆ ಇಂದಿನ ಯುವ ಪೀಳಿಗೆಗೆ ತಿಳಿಸುವ ಅವಶ್ಯಕತೆಯಿದೆ ಎಂದರು.
ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಕಮಠಾಣ, ಕಾಮಣ್ಣ ಮದಗುಣಕಿ ಸೇರಿದಂತೆ ವಯೋವೃದ್ಧರು, ಮಕ್ಕಳು ಇದ್ದರು.

