ಸುದ್ದಿ ಸಂಗ್ರಹ ಕಾಳಗಿ
ತಾಲೂಕಿನ ಟೆಂಗಳಿ ಗ್ರಾಮದ ಐತಿಹಾಸಿಕ ಮಹಾದ್ವಾರದ (ಅಗಸಿ) ದುರಸ್ತಿ ಕಾರ್ಯ ಶೀಘ್ರ ಮಾಡುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಅಂಡಗಿ ಪ್ರತಿಷ್ಠಾನದ ಅಧ್ಯಕ್ಷ ಶಿವರಾಜ ಅಂಡಗಿ ಮನವಿ ಪತ್ರ ಸಲ್ಲಿಸಿದರು.
ಪಟ್ಟಣದಲ್ಲಿ ನಡೆದ ವಿವಿಧ ಕಾಮಗಾರಿಗಳ ಅಡಿಗಲ್ಲು ಸಮಾರಂಭದ ವೇಳೆ ಸಚಿವರನ್ನು ಭೇಟಿಯಾಗಿ, ಟೆಂಗಳಿ ಗ್ರಾಮದ ಮಹಾದ್ವಾರ ಅವನತಿ ಸ್ಥಿತಿಯಲ್ಲಿ ಇರುವುದರಿಂದ ತಕ್ಷಣವೇ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಮನವಿ ಮಾಡಿದರು.
ಮನವಿ ಪತ್ರದಲ್ಲಿ ಉಲ್ಲೇಖಿಸಿರುವಂತೆ, ಮೇ.17 ರಂದು ವಿಜಯವಾಣಿ ದಿನಪತ್ರಿಕೆ ಆಯೋಜಿಸಿದ್ದ ಫೋನ್-ಇನ್ ಕಾರ್ಯಕ್ರಮದಲ್ಲಿ ಟೆಂಗಳಿ ಗ್ರಾಮದ ಮಹಾದ್ವಾರದ ಸಮಸ್ಯೆಯ ಬಗ್ಗೆ ಜಿ.ಪಂ ಸಿಇಓ ಅವರ ಗಮನಕ್ಕೆ ತರಲಾಗಿತ್ತು. ಬಳಿಕ ಕಾಳಗಿ ತಾಲೂಕು ಅಭಿಯಂತರರಿಂದ ಜನವರಿ 19ರಂದು ಸುಮಾರು 16 ಲಕ್ಷ ವೆಚ್ಚದ ಅಂದಾಜು ಎಸ್ಟಿಮೇಟ್ ಸಿದ್ಧಪಡಿಸಲಾಗಿತ್ತು. ಆದರೆ ಇದುವರೆಗೆ ಕಾಮಗಾರಿ ಪ್ರಾರಂಭವಾಗಿಲ್ಲ ಎಂದು ತಿಳಿಸಿದರು.
ಇತಿಹಾಸ ಪ್ರಸಿದ್ಧವಾದ ಟೆಂಗಳಿ ಗ್ರಾಮ ರಾಷ್ಟ್ರಕೂಟರ ಕಾಲದಿಂದ ಪ್ರಮುಖ ಕೇಂದ್ರವಾಗಿದ್ದು, ಗ್ರಾಮದಲ್ಲಿ ಕೋಟೆ ಹಾಗೂ ಅನೇಕ ಐತಿಹಾಸಿಕ ಸ್ಮಾರಕಗಳು ಮತ್ತು ದೇವಾಲಯಗಳು ಇವೆ. ಗ್ರಾಮಕ್ಕೆ ಪ್ರವೇಶಿಸಲು ಮಹಾದ್ವಾರ ಇದೆ, ಈ ಐತಿಹಾಸಿಕ ಮಹಾದ್ವಾರದಲ್ಲಿ ಈಗ ಬಿರುಕು ಬಿಟ್ಟಿದೆ ಮತ್ತು ಗಿಡ-ಗಂಟೆಗಳು ಬೆಳೆದಿರುವುದರಿಂದ ಯಾವಾಗ ಕುಸಿಯುತ್ತೊ ಎಂಬ ಭೀತಿ ಎದುರಾಗಿದೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ಏಪ್ರಿಲ್ ತಿಂಗಳಲ್ಲಿ ಟೆಂಗಳಿ ಗ್ರಾಮದಲ್ಲಿ ಶ್ರೀ ಭೀಮೇಶ್ವರ ಜಾತ್ರೆ ನಡೆಯಲಿದೆ, ಸಾವಿರಾರು ಭಕ್ತರು ಗ್ರಾಮಕ್ಕೆ ಆಗಮಿಸುವ ಸಾಧ್ಯತೆಯಿದೆ. ವಿಶೇಷವಾಗಿ ಬ್ಯಾಂಡ್ ಬಾಜಾ ಸಹಿತ ಫಲ್ಲಕ್ಕಿ ಮೆರವಣಿಗೆ ಗ್ರಾಮದ ಮಹಾದ್ವಾರದ ಮೂಲಕವೇ ಸಾಗುವ ಹಿನ್ನೆಲೆಯಲ್ಲಿ ಯಾವುದೆ ಅವಘಡ ಸಂಭವಿಸದಂತೆ ತಕ್ಷಣ ಅಗಸಿ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ಮನವಿ ಪತ್ರದ ಮೂಲಕ ವಿನಂತಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಪ್ರಮುಖರಾದ ಸುಭಾಷ್ ರಾಠೋಡ್, ರಮೇಶ್ ಮರಗೋಳ, ರಾಜೇಶ್ ಗುತ್ತೇದಾರ, ವಿನೋದಕುಮಾರ ಜನೇವರಿ ಸೇರಿದಂತೆ ಅನೇಕರು ಇದ್ದರು.

