ಸುದ್ದಿ ಸಂಗ್ರಹ ಶಹಾಬಾದ
ವಿಶ್ವದ ತೈಲ ಮಾರುಕಟ್ಟೆಯನ್ನು ತನ್ನ ಕಪಿಮುಷ್ಟಿಯಲ್ಲಿ ಇಟ್ಟುಕೊಳ್ಳಲು ಅಮೆರಿಕ ಹುನ್ನಾರ ನಡೆಸುತ್ತಿದೆ. ತೈಲ ನಿಕ್ಷೇಪ ಹೊಂದಿರುವ ರಾಷ್ಟ್ರಗಳನ್ನು ಕುತಂತ್ರದಿಂದ ತನ್ನ ಅಂಕೆಯಲ್ಲಿಟ್ಟುಕೊಳ್ಳಲು ಪ್ರಯತ್ನಿಸುತಿದೆ. ಅದು ಸಾಧ್ಯವಾಗದಿದ್ದರೆ ಇಲ್ಲಸಲ್ಲದ ಕಾರಣ ನೀಡಿ ಸಾರ್ವಭೌಮ ರಾಷ್ಟ್ರಗಳ ಮೇಲೆ ಮಿಲಿಟರಿ ದಾಳಿ ಮಾಡುವುದರ ಮೂಲಕ ಅಮೆರಿಕ ಮತ್ತು ಇಸ್ರೇಲ್ ಸಾಮ್ರಾಜ್ಯಶಾಹಿಗಳು ಪ್ರಪಂಚವನ್ನು ಸ್ಮಶಾನ ಮಾಡುತ್ತಿವೆ. ಅವರಿಗೆ ನಮ್ಮ ಧಿಕ್ಕಾರವಿದೆ ಎಂದು ಎಸ್’ಯುಸಿಐ (ಸಿ)ನ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯ ಎಮ್ ಶಶಿಧರ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಬಸವೇಶ್ವರ ವೃತ್ತದಲ್ಲಿ ಸೋಮವಾರ ಸಂಜೆ ಎಸ್’ಯುಸಿಐ (ಕಮ್ಯೂನಿಸ್ಟ್) ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ ಅಮೆರಿಕ-ಇಸ್ರೇಲ್ ಸಾಮ್ರಾಜ್ಯಶಾಹಿಗಳು ಇರಾನ್ ಮೇಲೆ ಮಾಡಿರುವ ದಾಳಿಯನ್ನು ವಿರೋಧಿಸಿ ಪ್ರತಿಭಟನಾ ಪ್ರದರ್ಶನ ಉದ್ದೇಶಿಸಿ ಮಾತನಾಡಿದ ಅವರು, ವಿಶ್ವದ ಸಾರ್ವಭೌಮ ರಾಷ್ಟ್ರದ ಮೇಲೆ ಯಾವುದೆ ರಾಷ್ಟ್ರವು ದಾಳಿ ಮಾಡುವುದು ಅಂತರರಾಷ್ಟ್ರೀಯ ಕಾನೂನು ಉಲ್ಲಂಘನೆಯಾಗಿದೆ. ಇದನ್ನು ಅಮೆರಿಕ, ರಷ್ಯಾ ಮತ್ತು ಇಸ್ರೇಲ್ ಸಾಮ್ರಾಜ್ಯಶಾಹಿ ದೇಶಗಳು ನಿರಂತರವಾಗಿ ಉಲ್ಲಂಘನೆ ಮಾಡುತ್ತಿವೆ. ವಿಶ್ವಸಂಸ್ಥೆಯು ಇವರ ಅಟ್ಟಹಾಸವನ್ನು ಮಟ್ಟಹಾಕಲು ಯಾವುದೆ ಪ್ರಬಲವಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ. ಅದು ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವುದು ಒಂದು ಕಡೆಯಾದರೆ, ಉಳಿದ ರಾಷ್ಟ್ರಗಳು ಮೌನವಾಗಿರುವುದರಿಂದ ಅಮೆರಿಕ- ಇಸ್ರೇಲ್ ಭಯೋತ್ಪಾದನೆ ಮುಂದುವರೆಸುತ್ತಿದೆ. ಶಾಲೆ ಮತ್ತು ಆಸ್ಪತ್ರೆಗಳ ಮೇಲೆ ದಾಳಿ ಮಾಡುವುದರ ಮೂಲಕ ಮಕ್ಕಳ ಹಾಗೂ ಜನಸಾಮಾನ್ಯರ ಮಾರಣಹೋಮ ನಡೆಸುತ್ತಿರುವುದು ರಾಕ್ಷಸಿಕೃತ್ಯವನ್ನು ನಮ್ಮ ಪಕ್ಷ ಎಸ್.ಯು.ಸಿ.ಐ (ಸಿ) ಯು ಪ್ರಬಲವಾಗಿ ವಿರೋಧಿಸುತ್ತದೆ, ಈ ಕೂಡಲೆ ನರಹಂತಕ ಅಮೆರಿಕ-ಇಸ್ರೇಲ್ ಸಾಮ್ರಾಜ್ಯಶಾಹಿಗಳು ಇರಾನ್ ಮೇಲೆ ಮಾಡಿರುವ ದಾಳಿಯನ್ನು ಹಿಂಪಡೆಯುವಂತೆ ಒತ್ತಾಯಿಸುತ್ತೆವೆ ಎಂದರು.
ಎಸ್’ಯುಸಿಐ (ಸಿ ) ಶಹಾಬಾದ ಸ್ಥಳೀಯ ಸಮಿತಿಯ ಕಾರ್ಯದರ್ಶಿ ಗಣಪತರಾವ ಕೆ ಮಾನೆ ಜನರನ್ನು ಉದ್ದೇಶಿ ಮಾತನಾಡಿ, ನರಹಂತಕ ಅಮೆರಿಕ-ಇಸ್ರೇಲ್ ದೇಶಗಳು ಇರಾನ್’ನ ಪರಮಾಣು ಶಸ್ತ್ರಾಸ್ತ್ರ ಯೋಜನೆಯ ಬಗ್ಗೆ ವಿಶ್ವಾಸಾರ್ಹ ಪುರಾವೆಗಳಿಲ್ಲದಿದ್ದರು ದಾಳಿ ಮಾಡಿ ಅಲ್ಲಿನ ಅಧ್ಯಕ್ಷರ ಮತ್ತು ಜನಸಾಮಾನ್ಯರನ್ನು ಕೊಂದಿರುವುದು ಘೋರಕೃತ್ಯವಾಗಿದೆ. ಅಲ್ಲಿನ ನಾಗರಿಕರಿಗೆ ಸ್ವಾತಂತ್ರ ಹರಣವಾಗಿದೆ ಎಂದರು.
ಈ ಪ್ರತಿಭಟನೆಯಲ್ಲಿ ಎಸ್’ಯುಸಿಐ (ಸಿ) ಪಕ್ಷದ ನಾಯಕರಾದ ರಾಮಣ್ಣ ಇಬ್ರಾಹಿಂಪೂರ್, ರಾಘವೇಂದ್ರ, ಎಮ್, ಜಿ ಜಗನ್ನಾಥ, ಎಸ್.ಎಚ್ ಗುಂಡಮ್ಮ ಮಡಿವಾಳ, ರಾಜೇಂದ್ರ ಆತ್ನೂರ, ಭಾಗಣ್ಣ ಬುಕ್ಕ, ನೀಲಕಂಠ ಹುಲಿ, ರಮೇಶ ದೇವಕರ್, ಮಹಾದೇವಿ ಮಾನೆ, ಮಹಾದೇವಿ ಆತ್ನೂರ್, ಕಿರಣ ಮಾನೆ, ರಘು ಪವಾರ, ಆನಂದ, ಸಿದ್ದು ಚೌಧರಿ, ತಿಮ್ಮಣ್ಣ ಮಾನೆ, ರಾಧಿಕ ಚೌಧರಿ, ನೂರಾರು ಜನರು, ವಿದ್ಯಾರ್ಥಿಗಳು-ಯುವಜನರು ಮತ್ತು ಮಹಿಳೆಯರು ಭಾಗವಸಿದ್ದರು.

