Site icon ಸುದ್ದಿ ಸಂಗ್ರಹ

ಕೋಲಾರದಲ್ಲಿ ದೇಶದ ಮೊದಲ ಮಿನಿ ಹೆಲಿಕಾಪ್ಟರ್ ತಯಾರಿಕಾ ಘಟಕಕ್ಕೆ ಇಂದು ಮೋದಿ ಚಾಲನೆ‌

ಸುದ್ದಿ ಸಂಗ್ರಹ ನವದೆಹಲಿ
ಕೋಲಾರದ ವೇಮಗಲ್‌ನಲ್ಲಿ ದೇಶದಲ್ಲೆ ಮೊದಲ ಖಾಸಗಿ ಮಿನಿ ಹೆಲಿಕಾಪ್ಟರ್ ನಿರ್ಮಾಣ ಘಟಕ ಕಾರ್ಯಾರಂಭ ಮಾಡಲಿದೆ. ರಕ್ಷಣಾ ಮಿನಿ ಹೆಲಿಕಾಪ್ಟರ್ ನಿರ್ಮಾಣ ಘಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರಾನ್ ಮಂಗಳವಾರ ವರ್ಚುವಲ್‌ ಆಗಿ ಚಾಲನೆ ನೀಡಲಿದ್ದಾರೆ.

ಟಾಟಾ ಕಂಪನಿಯಿಂದ ಮೊದಲ ಬಾರಿಗೆ ಮಿನಿ ಏರ್ ಬಸ್, ಹೆಲಿಕಾಪ್ಟರ್ ನಿರ್ಮಾಣ ಕಂಪನಿಯನ್ನು ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ಆರಂಭಿಸುತ್ತಿದ್ದು ಇಂದಿನಿಂದ ಮಿನಿ ಹೆಲಿಕಾಪ್ಟರ್ ಘಟಕ ಕಾರ್ಯಾರಂಭ ಮಾಡಲಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಖುದ್ದು ಹೆಲಿಕಾಪ್ಟರ್ ಘಟಕಕ್ಕೆ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಸುಮಾರು 16 ಎಕರೆ ಪ್ರದೇಶದಲ್ಲಿ ಮಿನಿ ಹೆಲಿಕಾಪ್ಟರ್ ಜೋಡಣಾ ಘಟಕ ನಿರ್ಮಾಣ ಕಾರ್ಯ ನಿರ್ವಹಿಸಲಿದೆ. ಈ ಕಂಪನಿ ವರ್ಷಕ್ಕೆ ಎಚ್125 ಮಾದರಿಯ 10 ಮಿನಿ ಹೆಲಿಕಾಪ್ಟರ್ ಗಳನ್ನು ನಿರ್ಮಾಣ ಮಾಡುವ ಸಾಮರ್ಥ್ಯ ಹೊಂದಿದೆ. ಮುಂದಿನ ದಿನಗಳಲ್ಲಿ ಕಂಪನಿ ತನ್ನ ಕಾರ್ಯ ವ್ಯಾಪ್ತಿ ವಿಸ್ತರಣೆ ಮಾಡಲಿದೆ.

ಈ ವೇಮಗಲ್ ಕೈಗಾರಿಕಾ ಪ್ರದೇಶ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ವೇ’ಗೂ ಕೂಡ ಹತ್ತಿರವಿರುವ ಕಾರಣದಿಂದ ಇದು ಸೂಕ್ತವಾದ ಸ್ಥಳ ಎಂದು ಈ ಜಾಗವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

2027ರಲ್ಲಿ ಮೊದಲ ಹೆಲಿಕಾಪ್ಟರ್ ಹೊರತರುವ ನಿರೀಕ್ಷೆ ಇದೆ. ಈ ಮಧ್ಯೆ ಬಿಇಎಲ್ ಸಹಭಾಗಿತ್ವದಲ್ಲಿ ಭಾರತದಲ್ಲಿ ಹಮ್ಮರ್ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸುವ ಒಪ್ಪಂದಕ್ಕೂ ಪ್ರಧಾನಿ ಮೋದಿ-ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರಾನ್ ಸಹಿ ಹಾಕಲಿದ್ದಾರೆ.

Exit mobile version