Site icon ಸುದ್ದಿ ಸಂಗ್ರಹ

ವಿದ್ಯಾರ್ಥಿ ದಿಸೆಯಿಂದಲೇ ನ್ಯೂಸ್ ಪೇಪರ್ ಓದುವ ಹವ್ಯಾಸ ಬೆಳೆಸಿಕೊಳ್ಳಿ: ಎಚ್.ಬಿ ಪಾಟೀಲ

ಸುದ್ದಿ ಸಂಗ್ರಹ ಕಲಬುರಗಿ‌
ರಾಜಕೀಯ, ಆಧ್ಯಾತ್ಮಿಕ, ಶೈಕ್ಷಣಿಕ, ಕೃಷಿ, ಮಾನವೀಯ ಮೌಲ್ಯಗಳು, ಕ್ರೀಡೆ, ಸಾಮಾಜಿಕ ಸಮಸ್ಯೆಗಳು ಮತ್ತು ಅವುಗಳಿಗೆ ಪರಿಹಾರಗಳನ್ನು, ಉದ್ಯೋಗ ಮತ್ತು ವೃತ್ತಿ ಮಾರ್ಗದರ್ಶನ, ಮನೋರಂಜನೆ ಸೇರಿದಂತೆ ವ್ಯಕ್ತಿಯ ವ್ಯಕ್ತಿತ್ವ ನಿರ್ಮಾಣಕ್ಕೆ ಅಗತ್ಯವಾದ ಎಲ್ಲಾ ವಿಷಯಗಳ ಜ್ಞಾನದ ಆಗರವಾದ ನ್ಯೂಸ್ ಪೇಪರ್‌ಗಳನ್ನು ವಿದ್ಯಾರ್ಥಿ ದಿಸೆಯಿಂದಲೇ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಮಾಧ್ಯಮಗಳು ಪ್ರಜಾಪ್ರಭುತ್ವದ ನಾಲ್ಕನೇ ರಂಗವಾಗಿ ಸೇವೆ ಮಾಡುತ್ತಿವೆ ಎಂದು ಉಪನ್ಯಾಸಕ ಎಚ್.ಬಿ ಪಾಟೀಲ ಹೇಳಿದರು.

ನಗರದ ಆಳಂದ ರಸ್ತೆಯ ಖಾದ್ರಿ ಚೌಕ್‌ನಲ್ಲಿನ ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಗುರುವಾರ ಏರ್ಪಡಿಸಿದ್ದ ‘ರಾಷ್ಟ್ರೀಯ ನ್ಯೂಸ್ ಪೇಪರ್ ದಿನಾಚರಣೆಯಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಪ್ರತಿ ವರ್ಷ ಜನವರಿ-29ರಂದು ‘ಭಾರತೀಯ ವೃತ್ತಪತ್ರಿಕೆ ದಿನ’ ಆಚರಿಸಲಾಗುತ್ತದೆ.1780ರಲ್ಲಿ ಜೇಮ್ಸ್ ಆಗಸ್ಟಸ್ ಹಿಕ್ಕಿ ಅವರಿಂದ ಮೊದಲ ಭಾರತೀಯ ಪತ್ರಿಕೆ ‘ದಿ ಬೆಂಗಾಲ್ ಗೆಜೆಟ್’ ಬಿಡುಗಡೆಯಾದ ಸ್ಮರಣಾರ್ಥವಾಗಿ ಈ ದಿನ ಆಚರಿಸಲಾಗುತ್ತದೆ. ಇದು ಪತ್ರಿಕೋದ್ಯಮದ ಕೊಡುಗೆ, ಅಭಿವ್ಯಕ್ತಿ ಸ್ವಾತಂತ್ರ‍್ಯ ಮತ್ತು ಮುದ್ರಣ ಮಾಧ್ಯಮದ ಮಹತ್ವವನ್ನು ಗುರುತಿಸುವ ದಿನವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಸ್ಲಾಂ ಶೇಖ್, ಶಿಕ್ಷಕಿಯರಾದ ಪೂಜಾ ಹೂಗಾರ, ಮುಸ್ಕಾನ್ ಶೇಖ್, ರುಕ್ಸಾನಾ ಪಟೇಲ್ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Exit mobile version