Site icon ಸುದ್ದಿ ಸಂಗ್ರಹ

ಸಮಾಜ ಸುಧಾರಕ, ಶಿಕ್ಷಣ ತಜ್ಞ ಮಹಾದೇವ ಗೋವಿಂದ ರಾನಡೆ ಅವರ 185ನೇ ಜನ್ಮ ದಿನಾಚರಣೆ

ಸುದ್ದಿ ಸಂಗ್ರಹ ಕಲಬುರಗಿ
ಮಹಾದೇವ ಗೋವಿಂದ ರಾನಡೆಯವರು ಲೇಖಕ, ವಿದ್ವಾಂಸ, ಸಮಾಜ ಸುಧಾರಕ ಮತ್ತು ಶಿಕ್ಷಣ ತಜ್ಞ ಮಹಾರಾಷ್ಟ್ರದ ಸಾಕ್ರಟೀಸ್’ ಎಂಬ ಬಿರುದಾಂಕಿತ ಹೊಂದಿದ ಅವರು ಬಾಂಬೆ ಹೈಕೋರ್ಟ್ನ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದಾರೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸ್ಥಾಪಕ ಸದಸ್ಯರಾಗಿದ್ದರು ಮತ್ತು ಪ್ರಕಾಶ್ ಪತ್ರಿಕೆ ಸಂಪಾದಿಸಿದರು. ‘ಪೂನಾ ಸರ್ವಜನಿಕ ಸಭಾ’ ಮತ್ತು ‘ಪ್ರಾರ್ಥನಾ ಸಮಾಜ’ದಂತಹ ಸಂಸ್ಥೆಗಳನ್ನು ಸ್ಥಾಪಿಸಲು ಸಹಾಯ ಮಾಡಿದರು. ಬಾಲ್ಯವಿವಾಹ ವಿರೋಧ, ವಿಧವೆಯರ ಪುನರ್ವಿವಾಹದಂತಹ ಸಾಮಾಜಿಕ ಕಾರ್ಯಗಳನ್ನು ಮಾಡಿದ್ದಾರೆ ಎಂದು ಉಪನ್ಯಾಸಕ ಎಚ್.ಬಿ ಪಾಟೀಲ್ ಹೇಳಿದರು.

ನಗರದ ಆಳಂದ ರಸ್ತೆಯ ಖಾದ್ರಿ ಚೌಕ್‌ನಲ್ಲಿನ ಸಕ್ಸಸ್ ಕಂಪ್ಯೂಟರ ತರಬೇತಿ ಸಂಸ್ಥೆಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ‘ಮಹಾದೇವ ಗೊವಿಂದ ರಾನಡೆಯವರ 185ನೇ ಜನ್ಮದಿನಾಚರಣೆ’ಯಲ್ಲಿ ಮಾತನಾಡಿದ ಅವರು, ರಾನಡೆಯವರು ‘ರೈಸ್ ಆಫ್ ದಿ ಮರಾಠಾ ಪವರ್’ ಎಂಬ ಪ್ರಸಿದ್ಧ ಕೃತಿಯನ್ನು ರಚಿಸಿದ್ದಾರೆ. ಭಾರತೀಯ ಆರ್ಥಿಕತೆಯ ಅಂಶಗಳ ವ್ಯಾಪಕವಾಗಿ ಜಾಗೃತಿ ಮೂಡಿಸಿ ‘ಭಾರತೀಯ ಆರ್ಥಿಕತೆಯ ಪಿತಾಮಹ’ ಎಂದು ಕರೆಯಲ್ಪಟ್ಟರು. ಪ್ರಕಾಶ್ ಎಂಬ ಆಂಗ್ಲೊ-ಮರಾಠಿ ಪತ್ರಿಕೆಯನ್ನು ಸಂಪಾದಿಸಿದರು. ರಾನಡೆಯವರು ಸಂವಿಧಾನಾತ್ಮಕ ತತ್ವಗಳ ಮೂಲಕ ಸುಧಾರಣೆ ನಂಬಿದ್ದರು ಮತ್ತು ಭಾರತದ ಆಧುನಿಕ ಚಿಂತನೆಯಲ್ಲಿ ಪ್ರಮುಖ ವ್ಯಕ್ತಿಗಳಾಗಿ ಉಳಿದಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಶಿಕ್ಷಕಿಯರಾದ ಪೂಜಾ ಹೂಗಾರ, ಮುಸ್ಕಾನ್ ಶೇಖ್, ರುಕ್ಸಾನಾ ಪಟೇಲ್, ಸ್ನೇಹಾ ಚೌಹಾಣ ಮತ್ತು ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.

Exit mobile version